September 30, 2009


ಬಣ್ಣ ಬಣ್ಣದ ತೊಗಲು
ಕಂಡು ಬೆರಗಾಗ ಬೇಡ,
ನನ್ನವಲ್ಲ ಇದು.
ರೇಷಿಮೆಯ ಹೊಳಪು
ಕಂಡು ಮೆಚ್ಚಬೇಡ,
ನಿಜವಲ್ಲ ಇದು.


ಬರುವೆಯಾದರೆ ಬಾ
ನಿನಗಾಗಿ ಕಾಯುವೆನು.
ಬಣ್ಣಗಳ ತೊಳೆದು,
ಬಟ್ಟೆಯ ಕಳಚಿ,
ಅಲಂಕಾರವ ಅಳಸಿ,
ಬೆತ್ತಲಾಗುವೆನು.
ಒಳ ಹೊರಗು ಒಂದಾಗಿ
ಕಲೆತು ನಿನ್ನ ಸೇರುವೆನು.


ಬೆಚ್ಚಿ ದೂರಾಗದಿರು
ಕೃತ್ರಿಮವ ಮೆಚ್ಚಿರುವೆ
ವಿಕೃತಿಯಲ್ಲ, ಪ್ರಕೃತಿಯಿದು
ಅಸಹಜತೆಯ ಹಿಂದಿನ
ಸಹಜ ಸೌಂದರ್ಯವಿದು.
ಅರಿಯಲು ಬಂದ
ನಿನಗೆನ್ನ ಕಾಣಿಕೆಯಿದು


ಈ ಕವಿತೆ ಬರೆದು ಹಲವು ದಿನಗಳಾಗಿವೆ. ಇದಕ್ಕೊಂದು ಹೆಸರಿಲ್ಲದೆ ನನ್ನ ಪುಸ್ತಕದೊಳಗೇ ಕುಳಿತಿದೆ. ತಕ್ಕುದಾದ ಹೆಸರು ಸೂಚಿಸಿ please.

September 16, 2009

ನೆನಪುಗಳು

ತಿಳಿ ಮೋಡದಂತೆ
ಸವಿ ನೆನಪುಗಳು
ಅರೆಚಣ ಸೂರ ಮೇಲೆದ್ದು
ಕಣ್ಮರೆಯಾಗುವವು

ಕರಿ ಮೋಡದಂತೆ
ಕಹಿ ನೆನಪುಗಳು
ಕಂಬನಿಗೆರೆಯದೆ
ರಥವೇರದು!!

September 8, 2009

ಲೆಕ್ಕ


ನಿನ್ನ ಮಾತುಗಳಿಗೆ ಲೆಕ್ಕವಿಲ್ಲ

ಅವುಗಳ ಅರ್ಥಕ್ಕೆ ಲೆಕ್ಕವಿದೆ

ನಿನ್ನ ಮೌನಕ್ಕೆ ಲೆಕ್ಕವಿದೆ

ಆದರದರ ಅರ್ಥಕ್ಕೆ....????