January 9, 2010

ಸ್ಮಶಾನವಾಸಿ

ಆಸ್ವಾದಿಸುವ ಪ್ರಕೃತಿಯ
ಅನುಭವಿಸುವ ಕ್ರೂರಿಗಳು
ಗಿಡಮರ ಕಾಯಿಪಲ್ಲೆಗಳು
ಪ್ರಾಣಿಪಕ್ಷಿ ಚಂದ್ರತಾರೆಗಳು
ಎಲ್ಲದರಲ್ಲೂ ಲಾಭವೆಣಿಸುವಿರಿ
ಹಿಂಡಿ ಹೀರಿ ನಿಸ್ಸಾರವಾದೊಡನೆ
ಒಗೆದು ತುಳಿದು ಮುನ್ನಡೆಯುವಿರಿ
ಕದುಪಾಪಿಗಳು ನೀವು
ಅಮಾನವೀಯ ಮಾನವರು...

ನಿಮಗೆಲ್ಲ ಅಪವಾದ ನಾನು
ಸ್ಮಶಾನ ಕಾಯುವವನು
ನಿರ್ಲೋಭಿ, ನಿರ್ಮೋಹಿ,
ನಿಸ್ವಾರ್ಥಿ!

ಬಡಿದಾಡಿ ನೀವೆಲ್ಲರೂ
ಸಂಗ್ರಾಮವಾಗಲಿ ನಿಮ್ಮಲ್ಲಿ
ಸತ್ತುಹೋಗಿ ಸ್ವಾರ್ಥಿಗಳೇ
ನಿಮ್ಮೆಲ್ಲರನೂ ಹೂತುಬಿಡುವೆ
ಕಡುಬಡವ ನಾನು
ಹಸನಾಗಲೆನ್ನ ಬದುಕು...


ತಪ್ಪಿರುವ ಹಾದಿಯಲ್ಲಿ ಸರಿಯಾಗಿ ನಡೆಯುವುದೇ ತಂತ್ರಜ್ಞಾನ!!
ಕಾಲೇಜಿನಲ್ಲಿ ethics ಬಗ್ಗೆ ತಿಳಿಸುವಾಗ ನನ್ನಲಿ ಮೂಡಿದ
ಧ್ವಂಧ್ವದ ಕೂಸೇ ಈ ಕವಿತೆ.. ನಾಲ್ಕು ವರ್ಷ ಕಲಿತದ್ದು ಏತಕ್ಕೆ ಎಂಬ ತರ್ಕವೇ ಮುನ್ನುಗ್ಗಿ ಕವಿತೆಯಾಯಿತು.. ಸರಿ-ತಪ್ಪುಗಳನ್ನು ಮುಂದಿಟ್ಟು ದಾರಿ ಕಂಡುಕೊಳ್ಳಿ ಅಂತ ಹೇಳಿ ಕಾಲೇಜಿಂದ ಹೊರಹಾಕಿಬಿಟ್ಟರು...!!!

November 6, 2009

ಬದಲಾವಣೆ

ಅಂದು, ಕಥೆ-ಕವಿತೆಗಳನು ಓದುತ್ತಿದ್ದೆ
ಬಣ್ಣದ ಪದಗಳ ಕಂಡಿದ್ದೆ
ಅವುಗಳ ಪುಳಕಗಳನು
ಅನುಭವಿಸಿದ್ದೆ, ಆದರೆ
ಭಾವನೆಗಳನ್ನಲ್ಲ!


ಮುಂದೆ, ನಾನೂ ಬರೆದೆ,
ಪುಟಗಳಂತೆ.
ಪದಗಳ ಪೋಣಿಸಿ
ಮಾಲೆಯನಾಗಿಸಿದೆ,
ಸುವಾಸನೆ?
ಸಿಕ್ಕಿರಲಿಲ್ಲ, ಎಂದೆಂದಿಗೂ.
ಆದರೂ ತೃಪ್ತಿಯ ತುದಿ,
ಗೆಲುವಿನ ಅಹಂಭಾವ!!


ಇಂದು, ಸೋತು ನಿಂತಿರುವೆ,
ಭಾವನೆಗಳ ಉತ್ತುಂಗದಿ,
ಪರಿಮಳವ ತುಂಬಲು
ಪದಗಳೇ ಸಾಲದು
ಎರಡು ಪದಗಳ ಜೋಡಿಸಲೂ
ಸೋತಿಹೆನು , ಪುಟವೆಲ್ಲಿಯದು?
ಹಾಳೆಯೆಲ್ಲ ಖಾಲಿ,
ಬರೆದ ಪದಗಳಲೂ ಅತೃಪ್ತಿ!
ಆದರೂ ಎಂಥದೋ ಸಂತಸ,
ಸೋಲಿನಲೂ ಪರಿಪೂರ್ಣತೆ.

-ಸೋತು ಗೆದ್ದವಳು!!!

October 29, 2009

ಮನಸ್ಸೆರಡು ಕನಸೊಂದು!


ಹೂಗಳಿಗೆ ಮುತ್ತಿಟ್ಟು
ಇಬ್ಬನಿಯ ಕದ್ದಿದ್ದ
ಈಗವನ ಗುರಿ
ನನ್ನ ಕೆಂಪು ಕೆನ್ನೆಗಳು!


ಹೊರಳಾಟವೇ ನಡೆದಿತ್ತು
ಮುಸುಕು ಹೊದ್ದು,
ನನ್ನಷ್ಟಕ್ಕೇ ನಗುತ್ತಿದ್ದೆ
ಸವಿಗನಸ ಮೆಲಕುತ್ತಾ!


ಬೀಪ್! ಬಿತ್ತೊಂದು ಮೆಸೇಜು
ನಿನ್ನಂಥ ಗೆಳತಿ ಇನ್ನಿಲ್ಲವೆಂದು
ಎದುರೆರಡು ಮಾತೂ ಆಡದ
ಮಾಸಿದ ನೆನಪಿನವಳದು!


ಧಾರಾವಾಹಿಯ ಕಂತಾಗಿತ್ತು
ನನ್ನ ಸವಿಗನಸು...
ಮತ್ತೆ ನೆನೆದೆನು, ಕನಸಿನಲಿ
ಸುರಿದ ಪ್ರೇಮಸಿಂಚನದಲಿ!


ಹಿಡಿದ ಕೈ ಬಿಡಿಸಿ ಓಡಿದ್ದೆ,
ತಾಳದೆ ಅವನ ಬಿಸಿಯುಸಿರ..
ಅರೆಗಣ್ಣಲಿ ಮಿಸುಕಾಡಿದೆ
"ಈ ಕೈ ನಿನದೇ ಕಣೋ!"


ರಮಿಸುತಲೇ ಸೋಲುತಿತ್ತು
ಕೆಂಗೆನ್ನೆಗಳಿಗೆ ಕೆಂಗಣ್ಣುಗಳು
ಕೈ ಹಿಡಿಯುವಷ್ಟರಲೇ,
ರಿಂಗಣಿಸಿತು ಹಾಳು ಮೊಬೈಲು!


"ಕ್ಷಮಿಸೋ", ಮತ್ತವನ ರಮಿಸಲಾರೆ
ನಿರಾಸೆಗಣ್ಣಲಿ ಕಿವಿಗಿಟ್ಟೆ ಅದನ್ನು
"_______" ಸೇಬೂ ನಾಚಿತ್ತು ನನ್ನ ನೋಡಿ
"ಲೇ ಹುಡುಗಿ, ಕನಸಿನಲ್ಲೂ, ಓಡಿದೆಯಲ್ಲೇ!!"


October 12, 2009

ಬಳಲಿಹೆನು

ನಡುರಾತ್ರಿಯಲಿ ತಲೆದಿಂಬು
ಬಿಸಿಕಂಬನಿಗಳಲಿ ತೊಯ್ದಿತ್ತು
ಜೀವನದಲಿ ನಾನಿಟ್ಟ ಇಂಬು
ಹಸಿಯಿದ್ದಾಗಲೇ ಬೆಂದಿತ್ತು

ಕಾವಿತ್ತು ಮೊಳೆಸಿತು ಎಳೆಬಿಸಿಲು,
ಬೆಚ್ಚಗಿನ ಪ್ರೀತಿ ಮಡಿಲಲಿ.
ಕಾಯಿಸಿ ಅಳಿಸಿತು ರಣಮುಗಿಲು,
ಬಿಸಿ ಕಂಬನಿ ಕಡಲಲಿ.

ನುಣುಪಾಯಿತು ಒರಟು ಕೆನ್ನೆಗಳು
ಹರಿದ ಕಂಬನಿಗಳಿಂದ
ನೆನಪಾಯಿತು ಸವಿನೆನ್ನೆಗಳು
ಹರಿದ ಮನಗಳಿಂದ

ಕಡಲಿನ ಚಂಡಮಾರುತವು
ಜೊತೆಯುಂಟು ನನಗೆ,
ಸಾಗುವುದು ಪಯಣವು
ಹುಟ್ಟು ನನದಲ್ಲ, ಮುಳುಗಿಸಲಿ ಹೇಗೆ???


October 5, 2009

ಅಂತಿಮ ಅತಿಥಿ

ಸಾಗರದ ಮಧ್ಯದಲಿ ನಿಂತು ನೀನು
ಬಾಯಾರಿಕೆಯಿಂದ ಬಳಲಿದರೆ
ನಿನಗಾಗಿ ಉಳಿಯುವ ಪನ್ನೀರು ನಾನು.

ಗೆಜ್ಜೆನಾದದಲ್ಲಿ ನೀನು
ಅಪಸ್ವರವ ನುಡಿಸಿದರೆ
ನಿನಗಾಗಿ ಹೊರಡುವ ನಿನಾದ ನಾನು.

ಸಂಗಾತಿಯ ಸರಸದಲಿ ನೀನು
ಹುಳಿ ವಿರಸವ ಸವಿದರೆ
ನಿನಗಾಗಿ ಕಾಯುವ ಸಂಗಾತಿ ನಾನು.

ಪ್ರಶ್ನೆಗಳ ವ್ಯೂಹದಲಿ ನೀನು
ಒಂಟಿಯಾಗಿ, ಉತ್ತರ ಕಾಣದಿದ್ದರೆ
ನಿನಗಾಗಿ ಉತ್ತರವಾಗುವ ಪ್ರಶ್ನೆ ನಾನು.

ಸುಖ-ಶಾಂತಿ ಕೇಳದಿರು ನೀನು
ನಿನ್ನೆಡೆಗೆ ಬರುವಾಗ ನಾನು,
ಸ್ವಾರ್ಥಿಯಾಗಿರು, ಶಾಂತಿ ನಿನಗಷ್ಟೆ!!!